ನೈಸರ್ಗಿಕ ವಿಪತ್ತುಗಳ ನಿರ್ವಹಣೆಯಲ್ಲಿ ನಾಗರೀಕರ ಪಾತ್ರ


        ನಮ್ಮ ತಾಯಿ ನಮಗೆ ಜನ್ಮ ಕೊಡುತ್ತಾಳೆ ನಿಜ, ಆದರೆ ನಮಗೆ ಬೇಕಾಗುವ ಹವೆ, ನೀರು ಮತ್ತು ಅನ್ನ ಇತ್ಯಾದಿ ಎಲ್ಲವುಗಳನ್ನು ನಮಗೆ ಉಚಿತವಾಗಿ ನೀಡಿ ಸಾಕಿ ಸಲಹುವವುದು ನಿಸರ್ಗ. ಅದಕ್ಕಾಗಿಯೇ ನಾವು ನಿಸರ್ಗವನ್ನೂ ತಾಯಿ ಎಂದೇ ಒಪ್ಪಿಕೊಳ್ಳಬೇಕು. 

       ನಿಸರ್ಗ ಒಂದು ಬಹುದೊಡ್ಡ ‌ಶಕ್ತಿಯ ಆಗರ. ಇಲ್ಲಿ ಆಗಾಗ ಚಂಡ ಮಾರುತ, ಸಿಡಿಲು, ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಸುನಾಮಿ ಮುಂತಾದ ಆಪತ್ತುಗಳು ಸಂಭವಿಸುತ್ತಿರುತ್ತವೆ. ಇವುಗಳಲ್ಲದೆ ಪ್ಲೇಗ್, ಸಾರ್ಸ, ಹಕ್ಕಿ ಜ್ವರ, ಹಂದಿ ಜ್ವರ, ಸಾರಿ, ಕೊರೊನಾ ಮುಂತಾದ ಸಾಂಕ್ರಾಮಿಕ ರೋಗಗಳೂ ಆಗಾಗ ಹರಡುತ್ತವೆ. ನಿಸರ್ಗ ನಿರ್ಮಿತವಾದ ಇಂತಹ ಆಪತ್ತುಗಳಿಗೆ ನೈಸರ್ಗಿಕ ಆಪತ್ತುಗಳು ಎಂದು ಕರೆಯುತ್ತಾರೆ. 

        ನೈಸರ್ಗಿಕ ಆಪತ್ತುಗಳು ಸಂಭವಿಸಿದಾಗ ಸರಕಾರ ತನ್ನ ಪಾಲಿನ ಕರ್ತವ್ಯವನ್ನು ಮಾಡುತ್ತದೆ. ಆದರೆ ಪ್ರತಿಯೊಂದು ಕೆಲಸ ಕೇವಲ ಸರಕಾರದ್ದು ಎಂದು ತಿಳಿಯುವುದು ತಪ್ಪು. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರದೇ ಆದ ಕರ್ತವ್ಯಗಳೂ ಇರುತ್ತವೆ. 

       ಮೊಟ್ಟಮೊದಲನೆಯದಾಗಿ ಯಾವುದೇ ನೈಸರ್ಗಿಕ ಆಪತ್ತು ಸಂಭವಿಸಿದಾಗ 'ಧೈರ್ಯಂ ಸರ್ವತ್ರ ಸಾಧನಂ' ಎಂಬಂತೆ  ಮೊದಲು ಮಾನಸಿಕ ಧೈರ್ಯ ಬಹಳ ಮುಖ್ಯ. ನಾವು ಗಾಬರಿಯಾಗಬಾರದು. ಮೊದಲು ಸ್ವ ಸಂರಕ್ಷಣೆ ಮತ್ತು ಕುಟುಂಬದ ಸದಸ್ಯರ ರಕ್ಷಣೆಗಾಗಿ ಪ್ರಯತ್ನಿಸಬೇಕು. 

        ನಮ್ಮ ಕುಟುಂಬದ ಸದಸ್ಯರನ್ನು ಕಾಪಾಡಿದ ನಂತರ ನಮ್ಮ ಕಾರ್ಯ ಅಲ್ಲಿಗೆ ನಿಲ್ಲಬಾರದು. ಸಂಕಷ್ಟದಲ್ಲಿರುವ  ನಮ್ಮ ಅಕ್ಕ ಪಕ್ಕದ ಜನರಿಗೂ ನಮ್ಮ ಕೈಯಿಂದ ಸಾಧ್ಯವಿದ್ದಷ್ಟು ಸಹಾಯ ಮಾಡಬೇಕು. 

       ಮನೆಯವರಿಗೆ ಮತ್ತು ಅಕ್ಕ ಪಕ್ಕದವರಿಗೆ ಮಾನಸಿಕ ಧೈರ್ಯ ತುಂಬಬೇಕು. ಭೂಕಂಪದಂತಹ ಸಂದರ್ಭದಲ್ಲಿ ಅದು ಮತ್ತೆ ಮತ್ತೆ ಸಂಭವಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿಸಬೇಕು. 

      ಸದ್ಯ ಜಗತ್ತಿನ ತುಂಬ ಕೊರೊನಾ ಸಾಂಕ್ರಾಮಿಕ ರೋಗ ಅತಿ ವೇಗವಾಗಿ ಹರಡುತ್ತಿದೆ. ಇಂತಹ ವೇಳೆಯಲ್ಲಿ ನಾವು ಮನೆಯಲ್ಲಿಯೇ ಇದ್ದು ಈ ರೋಗ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿದೆ. ಸರಕಾರದ ವತಿಯಿಂದ ಪೋಲಿಸರು ‌ತಮ್ಮ ಪಾಲಿನ ಕರ್ತವ್ಯವನ್ನು ಮಾಡುತ್ತಿದ್ದಾರೆ. ಅದೇ ರೀತಿ ವೈದ್ಯರೂ ಕೂಡ ತಮ್ಮ ಜೀವದ ಹಂಗು ತೊರೆದು ರೋಗಿಗಳ ಸೇವೆ ಮಾಡುತ್ತಿದ್ದಾರೆ. 

       ಇಂತಹ ಸಂದರ್ಭದಲ್ಲಿ  ನಾವು ಕೂಡ ಪೋಲಿಸರು, ವೈದ್ಯರು, ಸರಕಾರದ ಪ್ರತಿನಿಧಿಗಳು ಮತ್ತು ಸಮಾಜ ಸೇವಕರಿಗೆ ಸಹಕಾರ್ಯ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ದೇಶ ನೈಸರ್ಗಿಕ ಆಪತ್ತಿನಲ್ಲಿ ಸಿಲುಕಿರುವಾಗ ತನು ಮನ ಧನದಿಂದ ನಾವು ಸಹಾಯ ಮಾಡಬೇಕು. 

      ನಮ್ಮ ದೇಶದಲ್ಲಿಯ ಜನರು ನೈಸರ್ಗಿಕ ಆಪತ್ತುಗಳ ಸಂದರ್ಭದಲ್ಲಿ ಶಿಸ್ತು ಪಾಲನೆಯಲ್ಲಿ ಬಹಳ ಹಿಂದೆ ಇದ್ದಾರೆ. ಹಿಂದೊಮ್ಮೆ ಅಮೆರಿಕದ ಪೆಂಟಗನ್ ದಾಳಿಯಾದಾಗ ಸುಮಾರು ಹತ್ತು ಸಾವಿರ ಜನರು ತೀರಿಕೊಂಡರು. ಅದೇ ಕಟ್ಟಡದಲ್ಲಿ ಇನ್ನೂ ಮೂವತ್ತು ಸಾವಿರ ಜನರು ಇದ್ದರು. ನಮ್ಮ ದೇಶದ ಜನರು ಮಾಡುವಂತೆ ಅವಸರ ಮಾಡಿದ್ದರೆ ಇನ್ನೂ ಕನಿಷ್ಟ ಇಪ್ಪತ್ತು ಸಾವಿರ ಜನರು ಸಾಯುವ ಸಂಭವ ಇತ್ತು. ಆದರೆ ಆ ವೇಳೆ ಆ ಕಟ್ಟಡದಲ್ಲಿ ಇರುವ ಜನರು ಸಾವಿನ ಭಯದ ಭಯಂಕರ ಕರಿ ನೆರಳಲ್ಲೂ  ಸಮಯ ಪ್ರಜ್ಞೆ  ತೋರಿಸಿ ಶಿಸ್ತು ಪಾಲಿಸಿ ಸ್ವ ಸಂರಕ್ಷಣೆಯೊಂದಿಗೆ ಪರರ ರಕ್ಷಣೆಯನ್ನೂ ಮಾಡಿದರು. ಅಮೆರಿಕ ಜನರ ಈ ಶಿಸ್ತು ಗುಣ ನಮಗೆ ಮಾದರಿಯಾಗಬೇಕು. 

        ಇಂದಿನ ಕೊರೊನಾ ಸಂದರ್ಭದ ಬಗ್ಗೆ ನೋಡುವುದಾದರೆ ಅದು ಹುಟ್ಟಿದ ತವರು ಚೀನಾದಲ್ಲಿಯೇ ತುಂಬ ನಿಯಂತ್ರಣದಲ್ಲಿದೆ. ಇದಕ್ಕೆ ಸರಕಾರದ ಕರ್ತವ್ಯದ ಜೊತೆಗೆ ನಾಗರಿಕರ ಸಹಕಾರ್ಯವೂ ಅಷ್ಟೇ ಮಹತ್ವದ್ದಾಗಿದೆ. ಭಾರತದಲ್ಲಿ ಮೊದಲ ರೋಗಿ ಕಂಡು ಬಂದ ಕೇರಳ ರಾಜ್ಯವು ಕೂಡ ಇಂದು ಕೊರೊನಾವನ್ನು ನಿಯಂತ್ರಣದಲ್ಲಿರಿಸಿ ಮಾದರಿ ರಾಜ್ಯವೆನಿಸಿದೆ.  

        ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ.  ನೈಸರ್ಗಿಕ ಆಪತ್ತು ಯಾವುದೇ ಇರಲಿ, ಸರಕಾರ ಮತ್ತು ನಾಗರಿಕರು ಒಂದಾಗಿ ಶಿಸ್ತು ಪಾಲಿಸಿದರೆ ಎಲ್ಲರ ರಕ್ಷಣೆ ಸಾಧ್ಯ.  


ಡಾ. ಗುರುಸಿದ್ಧಯ್ಯಾ ಸ್ವಾಮಿ

ಅಕ್ಕಲಕೋಟ, ಮಹಾರಾಷ್ಟ್ರ 

ಪಿನ್- 413216

E mail gurusiddayya.s@gmail.com

ಮೊಬೈಲ್ -9175547259


Comments

Popular posts from this blog

ಸಿನಿಮಾಗಳು

ಕರ್ನಾಟಕದ ಅದ್ಭುತ ಅರಣ್ಯಗಳ ಬಗ್ಗೆಗಿನ ಪರಿಚಯ ಹಾಗೂ ನದಿಗಳ ಪರಿಚಯ