ನೈಸರ್ಗಿಕ ವಿಪತ್ತುಗಳ ನಿರ್ವಹಣೆಯಲ್ಲಿ ನಾಗರೀಕರ ಪಾತ್ರ
ನಮ್ಮ ತಾಯಿ ನಮಗೆ ಜನ್ಮ ಕೊಡುತ್ತಾಳೆ ನಿಜ, ಆದರೆ ನಮಗೆ ಬೇಕಾಗುವ ಹವೆ, ನೀರು ಮತ್ತು ಅನ್ನ ಇತ್ಯಾದಿ ಎಲ್ಲವುಗಳನ್ನು ನಮಗೆ ಉಚಿತವಾಗಿ ನೀಡಿ ಸಾಕಿ ಸಲಹುವವುದು ನಿಸರ್ಗ. ಅದಕ್ಕಾಗಿಯೇ ನಾವು ನಿಸರ್ಗವನ್ನೂ ತಾಯಿ ಎಂದೇ ಒಪ್ಪಿಕೊಳ್ಳಬೇಕು. ನಿಸರ್ಗ ಒಂದು ಬಹುದೊಡ್ಡ ಶಕ್ತಿಯ ಆಗರ. ಇಲ್ಲಿ ಆಗಾಗ ಚಂಡ ಮಾರುತ, ಸಿಡಿಲು, ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಸುನಾಮಿ ಮುಂತಾದ ಆಪತ್ತುಗಳು ಸಂಭವಿಸುತ್ತಿರುತ್ತವೆ. ಇವುಗಳಲ್ಲದೆ ಪ್ಲೇಗ್, ಸಾರ್ಸ, ಹಕ್ಕಿ ಜ್ವರ, ಹಂದಿ ಜ್ವರ, ಸಾರಿ, ಕೊರೊನಾ ಮುಂತಾದ ಸಾಂಕ್ರಾಮಿಕ ರೋಗಗಳೂ ಆಗಾಗ ಹರಡುತ್ತವೆ. ನಿಸರ್ಗ ನಿರ್ಮಿತವಾದ ಇಂತಹ ಆಪತ್ತುಗಳಿಗೆ ನೈಸರ್ಗಿಕ ಆಪತ್ತುಗಳು ಎಂದು ಕರೆಯುತ್ತಾರೆ. ನೈಸರ್ಗಿಕ ಆಪತ್ತುಗಳು ಸಂಭವಿಸಿದಾಗ ಸರಕಾರ ತನ್ನ ಪಾಲಿನ ಕರ್ತವ್ಯವನ್ನು ಮಾಡುತ್ತದೆ. ಆದರೆ ಪ್ರತಿಯೊಂದು ಕೆಲಸ ಕೇವಲ ಸರಕಾರದ್ದು ಎಂದು ತಿಳಿಯುವುದು ತಪ್ಪು. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರದೇ ಆದ ಕರ್ತವ್ಯಗಳೂ ಇರುತ್ತವೆ. ಮೊಟ್ಟಮೊದಲನೆಯದಾಗಿ ಯಾವುದೇ ನೈಸರ್ಗಿಕ ಆಪತ್ತು ಸಂಭವಿಸಿದಾಗ 'ಧೈರ್ಯಂ ಸರ್ವತ್ರ ಸಾಧನಂ' ಎಂಬಂತೆ ಮೊದಲು ಮಾನಸಿಕ ಧೈರ್ಯ ಬಹಳ ಮುಖ್ಯ. ನಾವು ಗಾಬರಿಯಾಗಬಾರದು. ಮೊದಲು ಸ್ವ ಸಂರಕ್ಷಣೆ ಮತ್ತು ಕುಟುಂಬದ ಸದಸ್ಯರ ರಕ್ಷಣ...